ನೆಪೋಲಿಯನ್ 3-
	1808-1873. ಚಾಲ್ರ್ಸ್ ಲೂಯಿ ನೆಪೋಲಿಯನ್ ಬೋನಾಪಾರ್ಟ್. ಫ್ರಾನ್ಸಿನ ಚಕ್ರವರ್ತಿ (1852-1870). 1ನೆಯ ನೆಪೋಲಿಯನ್ನನ ಸಹೋದರನೂ ಹಾಲೆಂಡಿನ ದೊರೆಯೂ ಆಗಿದ್ದ ಲೂಯಿ ಬೋನಾಪಾರ್ಟನ ಮಗ. ಇವನ ತಾಯಿ ಹಾರ್ಟೆನ್ಸ್ ದ ಬೂವಾರ್ನೆ. ಈತ 1808ರ ಏಪ್ರಿಲ್ 20ರಂದು ಜನಿಸಿದ. ಬಾಲ್ಯದ ಸ್ವಲ್ಪ ಕಾಲವನ್ನು ತಾಯಿಯ ಪಾಲನೆಯಲ್ಲಿ ಕಳೆದು, ಮೊದಲು ಆಗ್ಸ್‍ಬರ್ಗ್‍ನಲ್ಲೂ ಅನಂತರ ಸ್ವಿಟ್‍ಜರ್ಲೆಂಡಿನಲ್ಲೂ ಶಿಕ್ಷಣ ಪಡೆದ. ಒಂದನೆಯ ನೆಪೋಲಿಯನ್ನನ ಪತನಾನಂತರ ಬೋನಾಪರ್ಟ್ ಕುಟುಂಬದವರೆಲ್ಲ ಫ್ರಾನ್ಸಿನಿಂದ ಓಡಿಹೋಗಬೇಕಾಗಿ ಬಂದಿತ್ತು.

	ಕಾಲ ಕಳೆದಂತೆ ನೆಪೋಲಿಯನ್ನನ ಬಗ್ಗೆ ಜನಾಭಿಪ್ರಾಯ ಬದಲಾಗುತ್ತಿತ್ತು. ಆ ನೆಪೋಲಿಯನ್ನನಂತೆ ತಾನೂ ಚಕ್ರವರ್ತಿಯಾಗಬೇಕೆಂಬ ಹಂಬಲ ಈ ನೆಪೋಲಿಯನ್ನಿನಲ್ಲಿ ಬೆಳೆಯಿತು. 1830ರಲ್ಲಿ ಫ್ರಾನ್ಸಿನಲ್ಲಿ ಉಂಟಾದ ಕ್ರಾಂತಿಯಿಂದ ತನ್ನ ಬಯಕೆ ಈಡೇರುವುದೆಂದು ನಂಬಿದ ನೆಪೋಲಿಯನ್ 1831ರಲ್ಲಿ ಅಣ್ಣನೊಡನೆ ಇಟಲಿಯ ರೊಮಾನಾ ಎಂಬಲ್ಲಿ ಬಂಡಾಯವೆಬ್ಬಿಸಿದ. ಅಷ್ಟರಲ್ಲಿ ಆಸ್ಟ್ರಿಯದ ಸೈನ್ಯಗಳು ಬಂದ ಕಾರಣ ನೆಪೋಲಿಯನ್ ಸಹೋದರರು ಹಿಮ್ಮೆಟ್ಟಬೇಕಾಯಿತು. ಈ ಮಧ್ಯೆ ಅಣ್ಣ ರೋಗಗ್ರಸ್ತನಾಗಿ ಮೃತನಾದ. ಈ ದುರಂತ ವಾರ್ತೆ ಕೇಳಿದ ಹಾರ್ಟೆನ್ಸ್ ಓಡಿ ಬಂದು ಇವನನ್ನು ಫ್ರಾನ್ಸಿಗೆ ಕರೆತಂದಳು. ಮಗನಿಗೆ ಕಾಯಿಲೆಯೆಂಬ ನೆವವೊಡ್ಡಿ, ಇವನು ಫ್ರಾನ್ಸಿನಲ್ಲಿ ನೆಲಸಲು ಅವಳ ಫಿಲಿಪ್ ದೊರೆಯ ಅಪ್ಪಣೆ ಪಡೆದುಕೊಂಡಳು. ಆದರೆ ನೆಪೋಲಿಯನ್ ಅಲ್ಲಿಯ ವ್ಯವಹಾರಗಳಲ್ಲಿ ಕೈಹಾಕಿ ರಿಪಬ್ಲಿಕನ್ ಪಕ್ಷದ ಆಗ್ರಹಕ್ಕೆ ಗುರಿಯಾದ. ತಾಯಿಮಕ್ಕಳಿಬ್ಬರೂ ಲಂಡನ್ನಿಗೆ ತೆರಳಿ, ಕೊಂಚಕಾಲದ ಮೇಲೆ ಸ್ವಿಟ್ಸಜರ್ಲೆಂಡಿಗೆ ಹಿಂತಿರುಗಿದರು. 1836ರಲ್ಲಿ ಇವನು ಸ್ಟ್ರಾಸ್‍ಬರ್ಗ್ ಸೈನಿಕ ಠಾಣ್ಯವನ್ನು ಹಿಡಿಯಲು ಯತ್ನಿಸಿ ವಿಫಲನಾದ. ಫ್ರಾನ್ಸಿನ ದೊರೆ ಫಿಲಿಪ್ ಇವನನ್ನು ಬಂಧಿಸಿ ಅಮೆರಿಕಕ್ಕೆ ಸಾಗಿಸಿದ. ನ್ಯೂಯಾರ್ಕ್ ನಗರದಲ್ಲಿ ಬಂಧಮುಕ್ತನಾದ ನೆಪೋಲಿಯನ್ ಕಪಟ ರಹದಾರಿ ಪಡೆದು ಸ್ವಿಟ್‍ಜರ್ಲೆಂಡಿಗೆ ಮರಳಿ ಬಂದ. 

	ಸ್ವಿಟ್‍ಜóರ್ಲೆಂಡಿನಲ್ಲಿ ನೆಪೋಲಿಯನ್ನನಿಗೆ ಬೆಂಬಲ ದೊರೆಯದಾಯಿತು. ಆಗ ಇವನು ತಾನಾಗಿಯೇ ದೇಶವನ್ನು ತೊರೆದು ಇಂಗ್ಲೆಂಡಿಗೆ ತೆರಳಿ, ಡಿಸ್ರೇಲಿ ಮುಂತಾದ ಗಣ್ಯರ ಸಹವಾಸದ ಲಾಭ ಪಡೆದ. ಈ ನಡುವೆ ತನ್ನ ಕಲ್ಪನೆಯ ರಾಜ್ಯಭಾರ ಪದ್ಧತಿಯನ್ನು ರೂಪಿಸತೊಡಗಿ, 1839ರಲ್ಲಿ ದೊಡ್ಡಪ್ಪ ನೆಪೋಲಿಯನ್ ಚಕ್ರವರ್ತಿಯ ರಾಜಕೀಯ ಸಿದ್ಧಾಂತಗಳ ವಿವರಣಾತ್ಮಕ ಗ್ರಂಥವೊಂದನ್ನು ರಚಿಸಿದ. ಬೋನಾಪಾರ್ಟ್ ಸಿದ್ಧಾಂತ ಆ ಸ್ವದೇಶದಲ್ಲಿ ಬೇರೂರುತ್ತಿದೆಯೆಂಬ ಭ್ರಾಂತಿಯಿಂದ ತನ್ನ ಆಕಾಂಕ್ಷೆಯನ್ನು ಸಾಧಿಸಲು ಮತ್ತೊಮ್ಮೆ ಯತ್ನಿಸಿ 1840ರಲ್ಲಿ ಬೋಲೋನ್ ನಗರದ ಆಕ್ರಮಣಕ್ಕೆ ಯತ್ನಿಸಿದ; ಆದರೆ ಆ ಸಲವೂ ಸೋತು, ಜೀವಾವಧಿ ಕಾರಾವಾಸಕ್ಕೆ ಗುರಿಯಾದ. ಡಿಸೆಂಬರ್ 15ರಂದು ಈತನನ್ನು ಹ್ಯಾಮ್ ದುರ್ಗದಲ್ಲಿ ಬಂಧನದಲ್ಲಿಡಲಾಯಿತು. ಹ್ಯಾಮ್ ಕಾರಾಗೃಹ ತನಗೆ ಹ್ಯಾಮ್ ವಿಶ್ವವಿದ್ಯಾಲವಾಗಿತ್ತೆಂದು ಇವನೇ ಹೇಳಿಕೊಂಡಿದ್ದಾನೆ. ಆರು ವರ್ಷಗಳ ಕಾಲ ಅಲ್ಲಿ ಬಂದಿಯಾಗಿದ್ದ ನೆಪೋಲಿಯನ್ ಸಾಮ್ರಾಜ್ಯ ನಿರ್ಮಾಣ ಸಂಬಂಧವಾಗಿ ಅನೇಕ ಗ್ರಂಥಗಳನ್ನು ಲೇಖನಗಳನ್ನೂ ಬರೆದ. 1846ರ ಮೇ 26ರಂದು ಸೆರೆಯಿಂದ ತಪ್ಪಿಸಿಕೊಂಡ.

	1848ರಲ್ಲಿ ಫ್ರಾನ್ಸಿನಲ್ಲಿ ಪುನಃ ಕ್ರಾಂತಿ ಆರಂಭವಾಯಿತು. ಫಿಲಿಪ್ ದೊರೆ ಪದಚ್ಯುತನಾದ. ಒಡನೆಯೆ ನೆಪೋಲಿಯನ್ ಧಾವಿಸಿ ಬಂದು ತಾತ್ಕಾಲಿಕ ಸರ್ಕಾರಕ್ಕೆ ಸ್ನೇಹಹಸ್ತ ನೀಡಿದ. ಇವನು ಒಡನೆಯೇ ಫ್ರಾನ್ಸ್‍ನಿಂದ ಹೊರಟುಹೋಗಬೇಕೆಂದು ಸರ್ಕಾರ ವಿನಂತಿಸಿಕೊಂಡಿತು. ಸರ್ಕಾರದ ಅಪೇಕ್ಷೆಗೆ ಮನ್ನಣೆ ನೀಡಿ ನೆಪೋಲಿಯನ್ ಲಂಡನ್ನಿಗೆ ಹೋದ. ಇವನ ಬೆಂಬಲಿಗರನೇಕರು ನಡೆಸಿದ ತೀವ್ರ ಪ್ರಚಾರದ ಪರಿಣಾಮವಾಗಿ ಫ್ರಾನ್ಸಿನ ನ್ಯಾಯವಿಧಾಯಕ ಸಭೆಗೆ ಸದಸ್ಯನಾಗಿ ಆಯ್ಕೆ ಹೊಂದಿದ. ಆ ಕಾಲಕ್ಕೆ ರಾಜತಂತ್ರವನ್ನು ಮೈಗೂಡಿಸಿಕೊಂಡಿದ್ದ ನೆಪೋಲಿಯನ್ ಒಡನೆಯೆ ಮುನ್ನುಗ್ಗಿಬಾರದೆ ಲಂಡನ್ನಿನಿಂದ ಆ ಸ್ಥಾನಕ್ಕೆ ರಾಜೀನಾಮೆ ಕಳುಹಿಸಿದ. ತನ್ನ ಪರವಾಗಿ ಜನಾಭಿಪ್ರಾಯ ಇನ್ನೂ ಬಲಿಯುವವರೆಗೂ ಸಂಯಮದಿಂದ ವರ್ತಿಸಬೇಕೆಂಬುದು ಇವನ ತೀರ್ಮಾನವಾಗಿತ್ತು. ಸೆಪ್ಟೆಂಬರ್ 26ರಂದು ಇವನು ಮತ್ತೊಮ್ಮೆ ಚುನಾಯಿತನಾದ. ರಾಜಪ್ರಭುತ್ವದ ಬೆಂಬಲಿಗರೊಡನೆ ಸಂಧಾನ ನಡೆಸಿ, ಕ್ರೈಸ್ತಮತೀಯರ ಮೈತ್ರಿ ಗಳಿಸಿ, ಕಾರ್ಮಿಕ ವರ್ಗದ ಸಹಕಾರ ಪಡೆದು ಡಿಸೆಂಬರ್ 10ರಂದು ಅಧ್ಯಕ್ಷ ಸ್ಥಾನಕ್ಕೆ ಬಹುಮತದಿಂದ ಆರಿಸಿಬಂದ. ಅಂದಿನಿಂದ ನೆಪೋಲಿಯನ್ನನ ಜೀವನ ಚರಿತ್ರೆಯೂ ಫ್ರಾನ್ಸಿನ ಇತಿಹಾಸವೂ ಹಾಸುಹೊಕ್ಕಾಗಿ ಬೆರೆತವು.

	ಗಣರಾಜ್ಯ ಸಂವಿಧಾನ ಇವನನ್ನು ನಾಲ್ಕು ವರ್ಷಗಳ ಅವಧಿಗೆ ಅಧ್ಯಕ್ಷನಾಗಿ ಮಾಡಿತ್ತು. ಇವನು ಮತ್ತೆ ಆಯ್ಕೆ ಹೊಂದುವಂತಿರಲಿಲ್ಲ. ತಾನು ಹತ್ತು ವರ್ಷ ಅಧಿಕಾರದಲ್ಲಿ ಉಳಿಯುವಂತೆ ಸಂವಿಧಾನದ ಬದಲಾವಣೆಗೆ ಇವನು ಪ್ರಯತ್ನಪಟ್ಟ. ಆದರೆ ಅದಕ್ಕೆ ಒಪ್ಪಿಗೆ ಸಿಗಲಿಲ್ಲ. ಬಹುಶಃ ಅವಕಾಶ ದೊರಕಿದ್ದರೆ ಇವನ ಆಕಾಂಕ್ಷೆಗೆ ಮಿತಿ ಇರುತ್ತಿತ್ತೇನೋ. ಇವನು ಚಕ್ರವರ್ತಿಯಾಗುತ್ತರಲ್ಲಿಲ್ಲವೇನೋ. ಸೈನ್ಯದ ಹತೋಟಿಗಾಗಿ ಅಧ್ಯಕ್ಷ ನೆಪೋಲಿಯನ್ನನಿಗೂ ಪಾರ್ಲಿಮೆಂಟಿಗೂ ಸ್ಪರ್ಧೆ ಬೆಳೆಯಿತು. ನೆಪೋಲಿಯನ್ ದೇಶದಲ್ಲೆಲ್ಲಾ ಸಂಚರಿಸಿ ಸಾಮ್ರಾಜ್ಯದಲ್ಲಿ ಶಾಂತಿ ಸ್ಥಾಪನೆಯೇ ತನ್ನ ಮುಖ್ಯ ಉದ್ದೇಶವೆಂದು ಘೋಷಿಸಿದ. ಪಾರ್ಲಿಮೆಂಟಿನೊಡನೆ ಇವನು ಸೌಹಾರ್ದದಿಂದಲೇ ನಡೆದುಕೊಂಡ. 1850ರಲ್ಲಿ ಪಾರ್ಲಿಮೆಂಟ್ ಮತಾಧಿಕಾರದ ವ್ಯಾಪಿಯನ್ನು ಮೊಟಕು ಮಾಡಿದಾಗಲೂ ಆ ಹೊಣೆಯನ್ನೆಲ್ಲಾ ಆ ಸಭೆಯ ಮೇಲೆ ಹಾಕಿ ತಾನು ಪ್ರಜಾಸತ್ತೆಯ ರಕ್ಷಕನೆಂದೇ ತೋರಿಸಿಕೊಂಡ. ಇನ್ನೊಂದು ಕಡೆ, ಕಾರ್ಮಿಕವರ್ಗಗಳ ಸ್ನೇಹಸಂಪಾದನೆಗೆ ಯತ್ನಿಸಿದ. ಸಾರ್ವತ್ರಿಕ ಮತಾಧಿಕಾರವನ್ನು ಪುನಃ ನೀಡಬೇಕೆಂದು ಮಂತ್ರಿಮಂಡಲ ಅನಂತರ ಸೂಚಿಸಿದಾಗ ಪಾರ್ಲಿಮೆಂಟ್ ವಿರೋಧಿಸಿತು. ನೆಪೋಲಿಯನ್ನನ ಕಾರ್ಯಸಾಧನೆಗೆ ಅದೇ ಸುಸಂಧಿಯಾಯಿತು. ತನ್ನ ಛಾಯಾನುವರ್ತಿಗಳ ಸಹಾಯ ಸಹಕಾರಗಳಿಂದ 1857ರ ಡಿಸೆಂಬರ್ 2ರಂದು ಇವನು ಕ್ಷಿಪ್ರಾಕ್ರಮಣ ನಡೆಸಿ, ಪಾರ್ಲಿಮೆಂಟನ್ನು ವಿಸರ್ಜಿಸಿ ಪ್ರಮುಖ ನಾಯಕರನ್ನು ತನ್ನ ವಿರೋಧಿಗಳ ಪೈಕಿ 20,000 ಮಂದಿಯನ್ನೂ ಸೆರೆಯಲ್ಲಿಟ್ಟು ದೇಶಕ್ಕೆ ಮನವಿ ಸಲ್ಲಿಸಿದ. ಡಿಸೆಂಬರ್ 20ರಂದು ನಡೆದ ಜನಮತ ಗಣನೆಯಲ್ಲಿ ಇವನಿಗೆ ಪ್ರಚಂಡ ಬಹುಮತ ದೊರಕಿತು. 1852ರ ನವೆಂಬರ್‍ನಲ್ಲಿ ಇವನು ಇನ್ನೊಂದು ಜನಮತಗಣನೆ ನಡೆಸಿ ಫ್ರಾನ್ಸಿನ ಚಕ್ರವರ್ತಿಯಾಗಿ ಆಯ್ಕೆ ಹೊಂದಿದ. ತನ್ನನ್ನು 3ನೆಯ ನೆಪೋಲಿಯನ್ ಎಂದು ಕರೆದುಕೊಂಡ. (1ನೆಯ ನೆಪೋಲಿಯನ್ನನ ಮಗ 2ನೆಯ ನೆಪೋಲಿಯನ್ 1815ರ ಆಳಿದನೆಂದು ಲೆಕ್ಕ.)

	ಚಕ್ರವರ್ತಿಯ ಸ್ಥಾನ ಹೀಗೆ ಸುಭದ್ರಗೊಂಡರೂ ರಿಪಬ್ಲಿಕನ್ ಪಕ್ಷದ ಪ್ರಭಾವ ಪೂರ್ಣವಾಗಿ ಮಾಯವಾಗಿರಲಿಲ್ಲ. ಪೌರಸ್ವಾತಂತ್ರ್ಯನಷ್ಟದಿಂದ ಬೇಗುದಿಗೊಂಡ ಪ್ರಜಾಸಮುದಾಯವನ್ನು ಸಾಂತ್ವನಗೊಳಿಸುವ ಸಲುವಾಗಿ ಚಕ್ರವರ್ತಿ ನಾನಾ ದೇಶಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡ; ರೈಲುಮಾರ್ಗಗಳನ್ನು ಹಾಕಿಸಿದ; ದೇಶಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡ; ರೈಲುಮಾರ್ಗಗಳನ್ನು ಹಾಕಿಸಿದ; ದೊಡ್ಡ ದೊಡ್ಡ ಬ್ಯಾಂಕುಗಳನ್ನು ಸ್ಥಾಪಿಸಿದ; ಉದ್ಯಮ ಸಂಸ್ಥೆಗಳಿಗೆ ರಕ್ಷಣೆ ನೀಡಿದ. ನಿರ್ಯಾತ ವ್ಯಾಪಾರವನ್ನು ವೃದ್ಧಿಪಡಿಸಿದ. ಪ್ಯಾರಿಸ್ ನಗರ ಸುಂದರವಾಗಲು ಇವನೇ ಬಹಳಮಟ್ಟಿಗೆ ಕಾರಣ.

	ನೆಪೋಲಿಯನ್ನನ ಆಂತರಿಕ ನೀತಿ ಪ್ರಗತಿನಿಷ್ಠವಾಗಿತ್ತು. ಆದರೆ ವಿದೇಶಾಂಗ ನೀತಿ ಯುದ್ಧನಿಷ್ಠವಾಗಿತ್ತು. ದೇಶದೊಳಗೆ ಪರಮಾಧಿಕಾರ ಗಳಿಸಿದ ನೆಪೋಲಿಯನ್ ವಿದೇಶಗಳಲ್ಲೂ ತನ್ನ ಸಾಮಥ್ರ್ಯವನ್ನು ವರ್ಧಿಸಿಕೊಳ್ಳಲು ಹವಣಿಸತೊಡಗಿದ. ಆಗ ಪೂರ್ವ ಮೆಡಿಟರೇನಿಯನ್ ತೀರದಲ್ಲಿ ರಷ್ಯದ ಪ್ರಭಾವ ಹೆಚ್ಚಿತ್ತು. ಕ್ರಿಮಿಯದಲ್ಲಿ ಅದು ತುರ್ಕಿಯ ಮೇಲೆ ಯುದ್ಧ ಹೂಡಿತ್ತು. ರಷ್ಯದ ಪ್ರಾಬಲ್ಯವನ್ನು ಕುಂಠಿತಗೊಳಿಸುವ ಉದ್ದೇಶದಿಂದ ನೆಪೋಲಿಯನ್ ಇಂಗ್ಲೆಂಡಿನ ಸಹಕಾರ ಪಡೆದುಕೊಂಡು ತುರ್ಕಿಯ ಪರವಾಗಿ ಹೋರಾಡಿದ. ಈ ಯುದ್ಧದಲ್ಲಿ ಯಾವ ಪಕ್ಷಕ್ಕೂ ಹೆಚ್ಚಿನ ಫಲ ದೊರೆಯಲಿಲ್ಲ. ಆದರೆ 1856ರಲ್ಲಿ ಪ್ಯಾರಿಸ್ ನಗರದಲ್ಲಿ ಸಂಧಾನ ಪಡೆದು ಒಪ್ಪಂದವಾದಾಗ, ದೂರಪ್ರಾಚ್ಯ ದೇಶಗಳ ವ್ಯವಹಾರದಲ್ಲಿ ಮಹತ್ತ್ವದ ಪಾತ್ರ ವಹಿಸಲು ಫ್ರಾನ್ಸಿಗೆ ಅವಕಾಶ ದೊರೆಯಿತು.

	ಇಟಲಿಯಲ್ಲಿ ಬಿರುಸಿನಿಂದ ಪ್ರಾರಂಭವಾಗಿದ್ದ ಏಕೀಕರಣದ ಆಂದೋಲನಕ್ಕೆ ನೆಪೋಲಿಯನ್ ಬೆಂಬಲ ನೀಡಿದ. 1860ರಲ್ಲಿ ಸವಾಯ್ ಮತ್ತು ನೀಸ್ ಪಟ್ಟಣಗಳು ಇವನಿಗೆ ವಶವಾದವು. ದೂರಪ್ರಾಚ್ಯದಲ್ಲಿ ಬ್ರಿಟಿಷರೊಂದಿಗೆ ಸೇರಿ ಇವನು ಎರಡು ಬಾರಿ ಚೀನೀಯರನ್ನು ಪರಾಭವಗೊಳಿಸಿದ. ಇದರ ಪರಿಣಾಮವಾಗಿ ಹೊಸ ರೇವುಪಟ್ಟಣಗಳಲ್ಲಿ ಫ್ರಾನ್ಸಿಗೆ ವ್ಯಾಪಾರಸೌಲಭ್ಯಗಳು ಲಭಿಸಿದವು. ಅನೇಕ ನಗರಗಳೊಡನೆ ರಾಜತಾಂತ್ರಿಕ ಸೌಕರ್ಯಗಳು ಪ್ರಾಪ್ತವಾದವು. ವಸಾಹತುಗಳೊಡನೆ ಫ್ರಾನ್ಸಿನ ವ್ಯಾಪಾರ ವರ್ಧಿಸಿತು. ಕ್ಯಾಂಬೋಡಿಯ ಆಶ್ರಿತರಾಜ್ಯವಾಯಿತು.

	1860ರಲ್ಲಿ ಮಹೋನ್ನತಿಗೇರಿದ್ದ ದ್ವಿತೀಯ ಸಾಮ್ರಾಜ್ಯದ ಘನತೆ ಆಮೇಲೆ ಇಳಿಮುಖವಾಗುತ್ತ ಬಂತು. ಆ ಹೊತ್ತಿಗೆ ವಿರೋಧ ಪಕ್ಷಗಳು ತಮ್ಮ ಬಲವನ್ನು ಹೆಚ್ಚಿಸಿಕೊಂಡಿದ್ದವು. 1863ರಲ್ಲಿ ನಡೆದ ಚುನಾವಣೆ ಅವುಗಳ ಪ್ರಾಬಲ್ಯದ ಸಂಕೇತವಾಗಿತ್ತು. ಚಕ್ರವರ್ತಿಯನ್ನು ಬಹಿರಂಗವಾಗಿಯೇ ವಿರೋಧಿಸುತ್ತಿದ್ದ ಶ್ರೀಮಂತ ವರ್ಗದವರನ್ನೂ ಒಲಿಸಿಕೊಂಡು, ಕ್ರಾಂತಿಕಾರಿ ಸಮಾಜವಾದಿಗಳಾಗಿದ್ದ ಕಾರ್ಮಿಕವರ್ಗದವರ ಬೆಂಬಲವನ್ನೂ ಗಳಿಸಿಕೊಂಡ ರಿಪಬ್ಲಿಕನ್ ಪಕ್ಷ ದಿನೇದಿನೇ ಪ್ರಭಾವ ಗಳಿಸಿತು. ವಿರೋಧಿಗಳಿಗೆ ನಾನಾ ರಾಜಕೀಯ ಸೌಲಭ್ಯಗಳನ್ನು ನೀಡಿ, ನಿರಂಕುಶ ಪ್ರಭುತ್ವವನ್ನು ತೊರೆದು ಉದಾರ ಸಾಮ್ರಾಜ್ಯ ಸ್ಥಾಪನಾಚಾರ್ಯನಾಗಲು ನೆಪೋಲಿಯನ್ ಮಾಡಿದ ಸಕಲತಂತ್ರಗಳೂ ವ್ಯರ್ಥವಾದವು. ಆಗ ನಿರುಪಾಯನಾದ ನೆಪೋಲಿಯನ್ ಉದಾರವಾದಿ ವಿರೋಧಪಕ್ಷದ ನಾಯಕ ಎಮೀಲ್ ಆಲಿವ್ಯೇನನ್ನು ಮಂತ್ರಿಮಂಡಲ ರಚನೆಗೆ ಆಹ್ವಾನಿಸಬೇಕಾಯಿತು(1869). 1870ರ ಜನವರಿ 2ರಂದು ನೂತನ ಮಂತ್ರಿಮಂಡಲ ಅಧಿಕಾರ ಸ್ವೀಕಾರ ಮಾಡಿತು. ಇವನ ಸರ್ವಾಧಿಕಾರ ಸಂವಿಧಾನಬದ್ಧ ಪ್ರಭುತ್ವವಾಗಿ ಮಾರ್ಪಟ್ಟಿತು. ಜನಮತಗಣನೆಯಲ್ಲಿ ಇದಕ್ಕೆ ಒಪ್ಪಿಗೆ ದೊರಕಿತು. ನೆಪೋಲಿಯನ್ನನ ಅಧಿಕಾರಕ್ಕೆ ಜೀವದಾನ ದೊರಕಿತು..

	ಅಂತರರಾಷ್ಟ್ರೀಯ ಪರಿಸ್ಥಿತಿ ಇದ್ದಕ್ಕಿದ್ದಂತೆ ಮಾರ್ಪಾಟು ಹೊಂದಿತು. ನೆಪೋಲಿಯನ್ 1870ರಲ್ಲಿ ಪ್ರಷ್ಯದ ಮೇಲೆ ಯುದ್ಧ ಸಾರಿದ. ಆಸ್ಟ್ರಿಯ ಮತ್ತು ಇಟಲಿ ದೇಶಗಳಿಂದ ಇವನಿಗೆ ನೆರವು ಬರಲಿಲ್ಲ. ಸೆಪ್ಟೆಂಬರ್ 2ರಂದು ನೆಪೋಲಿಯನ್ ಸೋತು ಸೆರೆಯಾದ. ಸೆಪ್ಟೆಂಬರ್ 4ರಂದು ಫ್ರೆಂಚ್ ಸಾಮ್ರಾಜ್ಯ ಕುಸಿಯಿತು. ಮೂರನೆಯ ಗಣರಾಜ್ಯ ಸ್ಥಾಪಿತವಾಯಿತು. ಯುದ್ಧ ಮುಗಿಯುವವರೆಗೂ ನೆಪೋಲಿಯನ್ ಜರ್ಮನರ ಬಂದಿಯಾಗಿದ್ದ. ಬಿಡುಗಡೆ ಹೊಂದಿದಮೇಲೆ ಇವನು ಪತ್ನಿಪುತ್ರರೊಡನೆ ಇಂಗ್ಲೆಂಡಿಗೆ ಹೋಗಿ ಚಿಸ್‍ಲ್‍ಹಸ್ರ್ಟ್‍ನಲ್ಲಿ ನೆಲಸಿದ. ಸ್ವಲ್ಪ ಕಾಲಾನಂತರ ಇವನು ಮತ್ತೆ ಫ್ರಾನ್ಸಿಗೆ ಹಿಂದಿರುಗಲು ಯತ್ನಸಿದನಾದರೂ ಇವನ ಯತ್ನ ಫಲಿಸಲಿಲ್ಲ. ಇವನ ಆರೋಗ್ಯ ಸಂಪೂರ್ಣವಾಗಿ ಕೆಟ್ಟಿತು. 1873ರ ಜನವರಿ 9ರಂದು ಇವನು ಮೃತನಾದ. ಇವನ ಒಬ್ಬನೇ ಮಗನೂ 1879ರಲ್ಲಿ ತೀರಿಕೊಂಡ.

	3ನೆಯ ನೆಪೋಲಿಯನ್ ಸಮಸ್ಯಾತ್ಮಕ ವ್ಯಕ್ತಿ. ಇವನೊಬ್ಬ ನಿರಂಕುಶ ಪ್ರಭು, ಸಾಹಸಿ ಎಂಬ ಭಾವನೆ ಬಹಳ ಕಾಲ ಇತ್ತು. 1ನೆಯ ನೆಪೋಲಿಯನ್ನನ ಸಾಮಥ್ರ್ಯ ಇವನಿಗಿಲ್ಲವೆಂದು ಭಾವಿಸಲಾಗಿತ್ತು. ಆದರೆ ವೈಯಕ್ತಿಕ ರಾಗದ್ವೇಷಾದಿಗಳು ಕಳೆದ ಮೇಲೆ ಇವನ ಪ್ರಾಮುಖ್ಯ ಹಾಗೂ ಸಾಧನೆಗಳನ್ನು ವಸ್ತುನಿಷ್ಠೆಯಿಂದ ಅವಲೋಕಿಸುವ ವಾತಾವರಣ ಉಂಟಾಯಿತು. ಇವನ ಬರಹಗಳು ಹಲವು ಸಂಪುಟಗಳಲ್ಲಿ ಪ್ರಕಟವಾಗಿವೆ.									  (ಎಂ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ